Monday 28 March 2016

ಸಾನೆಟ್ ಸೀಕ್ವೆಲ್: ಸರ್ಗೆಯಿ ಕ್ರೆಕಲೊವ್ ನ ಸ್ವಗತ

ಪುಷ್ಪಕ ಸಮಾನವಾದೊಂದು ನೌಕೆ ಚಿಮ್ಮಿ
ಅಂತರಿಕ್ಷ ವಿಹಾರದರೆಯಸ್ಥಿತ್ವ ಮಬ್ಬಿನಲ್ಲಿ-
ದ್ದಕ್ಕಿದ್ದಂತೆ ಒಳಗಿನೊತ್ತಾಯ ತಾಳದೆ ಫಳೀರೆಂದು
ತನ್ನಲ್ಲೆ ಬಿರುಕು ಬಿಟ್ಟ ಗಾಜಂತೆ ಕಂಡ
ಛಿದ್ರ ನೆಲ. ತ್ಯಾಜ್ಯನ ವಿರಹದನಂತ ಹೊತ್ತಿನ
ದುರ್ಬೀನಲ್ಲಿ ಕಂಡಿತು ಚೆಲುವೆ ಸಾವಿತ್ರಿ, ದೇಶ-
ದೇಶದ ಮೇಜಿಂದ ಮೇಜಿಗೆಡತಾಕುವ ನಿನ್ನ ಲತಾಂಗ.
ಪ್ರೇಮವುಕ್ಕಿ ಚಳುಕ್ಕನೆ ಸ್ಖಲಿಸಿ ಗುರುತ್ವ-
ರಾಹಿತ್ಯದಾಕಾಶವೆಲ್ಲವ ತುಂಬಿ ಊರ್ಧ್ವರೇತಸ್ಕತನದ-
ಪ್ರಸ್ತುತವಾದೊಂದು ಚಿಲ್ಲರೆ ಪ್ರಲೋಭ.

ಹರದಾರಿ ದೂರ ಸ್ವರ್ಗ ಲಂಘನಕ್ಕೋ
ಪ್ರಾಣದಾಖೈರು, ನಾನಿಲ್ಲಿ ಅಬಲ
ನೀನೆಂಬ ಮಣ್ಣ ಮರ್ತ್ಯಕ್ಕೆಳೆವರೆ ಚೆಲುವೆ
ಶಕ್ತವೇ ನಿನ್ನೀ ಹಂಬಲ?


(ಕ್ರೆಕಲೊವ್ ಮಿರ್ ಗಗನ ನಿಲ್ದಾಣದಲ್ಲಿದ್ದಾಗ ಸೋವಿಯೆಟ್ ರಷ್ಯಾ ಹೋಳಾಗಿತ್ತು. ಯಾವ ಹೊಸ ರಾಷ್ಟ್ರ ಈತನನ್ನು ವಾಪಸ್ಸು ಕರೆತರಬೇಕೆಂದು ಗೊಂದಲವಾಗಿ, ವಾರಗಟ್ಟಳೆ ಆತ ಬಾಹ್ಯಾಕಾಶದಲ್ಲೇ ಇರಬೇಕಾಗಿ ಬಂತು)

No comments:

Post a Comment