Tuesday 27 April 2021

ಕವಿಯ ಗುನ್ಹೆ

ಪುಂಡರು ಹಳಿಯ ಕೀಲು ಕಿತ್ತು ಒಯ್ದಿದ್ದಾರೆ
ರೈಲು ಇನ್ನೇನು ಬರಲಿದೆ
ಅಷ್ಟರಲ್ಲಿ ಕಾಳಜಿಯ ಕಣ್ಣಿಗಿದು ಬಿದ್ದರೆ ಒಳಿತು

ಬಾಲ್ಕನಿಯಿಂದ ಮುಂದೆ ಬಾಗಿ ನಿಂತಿರುವ ಮಗು
ಇನ್ನೇನು ಭಾರಕ್ಕೆ ತಡೆಗೋಲು ಬಿರಿಯಲಿದೆ
ಅಷ್ಟರಲ್ಲಿ ಯಾರ ಕೈಕೊಕ್ಕೆಗಾದರೂ ಸಿಲುಕಿದರೆ ಒಳಿತು

ಸೇತುವೆಯ ಮೇಲೆ ನಿಂತಿರುವ ಒಬ್ಬಂಟಿ ಹುಡುಗಿ
ಅವಳ ತಲೆಯೊಳಗಿನ ಜೇನುಹುಟ್ಟು ಒಡೆದಿದೆ
ಅಷ್ಟರಲ್ಲಿ ಅನಾಮಿಕರಾದರೂ ಅಲ್ಲಿ ಕಂಡರೆ ಒಳಿತು

ಕುರುಡನ ಊರುಗೋಲು ಚಪ್ಪಡಿಯ ತಟ್ಟಿದೆ
ಅದರ ಬಿರುಕು ಕೊನೆಯ ಹೆಜ್ಜೆಗೆ ಕಾಯುತ್ತಿದೆ
ಅಷ್ಟರಲ್ಲಿ ಯಾರಾದರೂ ಅಡ್ಡ ಬಂದರೆ ಒಳಿತು

ಇದೆಲ್ಲಾ ನನ್ನ ಕಣ್ಣಿಗೆ ಕಂಡಿದೆ
ನನ್ನ ದೃಷ್ಟಿ ಜಗದ ಘಾತಕ್ಕೆ ಸಿಲುಕಿದೆ
ನನ್ನ ಬದಲು ಇಲ್ಲಿ ಬೇರೆ ಯಾರಾದರೂ ಇದ್ದಿದ್ದರೆ ಒಳಿತು.








Tuesday 13 September 2016

ಗಜೇಂದ್ರಮೋಕ್ಷ

ಎಲ್ಲಾದರೂ
ಆನೆ ಸತ್ತರೆ, ಸರಕಾರದವರು
ಅದರ ದಂತ ಕಿತ್ತು, ಹೂಳುತ್ತಾರೆ.

ದಂತದ ಆಸೆಗೆ ಕಳ್ಳರು
ಹೂಳಿದ ಆನೆಯನ್ನೂ ಮತ್ತೆ
ರಾತ್ರೋರಾತ್ರಿ ಬಗೆದು
ಕೊಡಲಿ ಗರಗಸ ಹಾರೆ ಮೀಟಿ
ಅದರ ಮುಖ ಕೊಚ್ಚುತ್ತಾರೆ:
ಆನೆಗೆ ಹೊರಗೆ ದಂತ ಎಷ್ಟುದ್ದವೋ 
ಅಷ್ಟೇ ಒಳಗೆ ದವಡೆಯಲ್ಲಿ

ಹೋದವಾರ ಐಗೂರಿನ ತೋಟಕ್ಕೆ 
ಆನೆ ನುಗ್ಗಿ ಹೊಂಡಕ್ಕೆ ಬಿದ್ದು ಸತ್ತಾಗ
ರೇಂಜ್ ಆಫೀಸಿನವರಿಗೆ
ಹೊಸ ಉಪಾಯ ಹೊಳೆದು
ಆನೆಯನ್ನು ಸುಡುವುದೆಂದು ನಿರ್ಧರಿಸಿದರು.

ರಾತ್ರೋರಾತ್ರಿ ನಾಲ್ಕಡಿ ಗುಂಡಿ ತೆಗೆದು
ಹಾಲವಾಣ, ಸಾರುವೆ ಸಕಲ ಸೌದೆ ಜೋಡಿಸಿ
ಆನೆಗೆ ಸರಪಳಿ ಹಾಕಿ ಜೆಸಿಬಿಯ ಸೊಂಡಿಲಲ್ಲಿ
ತಂದು ಚಿತೆಯ ಮೇಲಿಟ್ಟರು.

ಸುಮಾರು ಐದು ಗಂಟೆಗಳ
ಕಾಲ ಉರಿದ ಸೌದೆ ಅಟ್ಟೆ
ನಂದಿ ಇದ್ದಿಲಾಯಿತು.
ಪರ್ವತಾಕಾರದ ಆನೆ
ಮಾತ್ರ ಹಾಗೆಯೇ ಮಲಗಿತ್ತು. ದರಿದ್ರ ನಾತ.
ಸುಟ್ಟ ಚರ್ಮ. ನೀಲಮೇಘವೇ ನೆಲಕ್ಕೆ
ಇಡಿಯಾಗಿ ಬಿದ್ದಂತೆ.

ಆಮೇಲೆ
ಲಾರಿ-ಟ್ರ್ಯಾಕ್ಟರುಗಳ ಹಳೆಯ
ಟೈರುಗಳ ತಂದು ಏಳಡಿ ಉದ್ದದ
ಅಟ್ಟಣಿಗೆಯಂಥಾ ಚಿತೆಯ ಮೇಲೆ
ಕೊಳೆಯುತ್ತಿದ್ದ ಆನೆಯನ್ನು ಮತ್ತೆ ಜೋಡಿಸಿ
ಬೆಂಕಿ ತಾಗಿಸಿದರು.

ಅಷ್ಟಗಲ ಆನೆಯೇ ಆಕಾಶಕ್ಕೆದ್ದಂತೆ
ಕರಿಹೊಗೆ ಬಡಿದು ದೂರದ
ಬಿಸಿಲೆ ಘಾಟಿಗೂ ಕಾಣಿಸುತ್ತಿತ್ತಂತೆ.

ಮೂರು ರಾತ್ರಿ ಮೂರು ಹಗಲು
ಒಂದೇಸಮ ಉರಿದು
ಖಾಲಿಯಾದಂತೆಲ್ಲಾ ಟೈರು
ಸಮಿತ್ತುಗಳನ್ನು ಊಡಿ
ಸೀಮೆಯ ದೇವಸ್ಥಾನಕ್ಕೆಲ್ಲಾ
ಹೇಳಿಕೊಂಡು ಕೊನೆಗೂ
ಆನೆ ಸಂಪೂರ್ಣ
ಸುಟ್ಟು ಬೂದಿಯಾಯಿತು.

ಕೊನೆಗೆ ಊರ ಗುಡಿಯಲ್ಲಿ
ಸಂತರ್ಪಣೆ ನಡೆಸಿ
ಭಾಗವತರ ಕರೆಸಿ 
ಮಕರನಿಂದ ಗಜೇಂದ್ರನನ್ನು ಬಿಡಿಸುವ 
ಕತೆ ಹೇಳಿಸಿದ್ದಾಯಿತು.
ಕತೆಯ ಕೊನೆಗೆ 
ಆನೆ ಯಾರು ಮಕರನಾರು ತಿಳಿಯದಾಗಿ, 
ಚಿತ್ತ ಆಭಾಸಕ್ಕೆ ಸಿಲುಕಿತು.   



Thursday 14 July 2016

ಮುಸಲ ಪರ್ವದ ಬಳಿಕ

ಯಮುನೆಯಾಚೆ
ಇದೆ ನಮ್ಮ ಹಳ್ಳಿ
ಅಗೊ ಅಲ್ಲಿ ದೂರದಲ್ಲಿ
ಕಬ್ಬಿನಾಲೆಯ ಮಾಡು
ಗಾಣದೆತ್ತಿನ ಕೋಡು
ಕಾಣಿಸಿತೆ ಮುಳುಗು ಬೆಳಕಿನಲ್ಲಿ


ಹಿಂದಣದ ಹಿರಿಯರಿಗೆ
ಒಂದೊಮ್ಮೆ ಕಂಡ
ವೇದವೇದ್ಯನ ಕಾಂಬ ಬಯಕೆ
ಶ್ಯಾಮ ಸುಂದರನ
ಕೆಳೆಭಕ್ತನಾಗುವಾ
ಭಾಗವತನ ಹರಕೆ

ಅಂಗ ಅಂಗದಲು
ಮಾರ್ದವದ ರಸವೊಸರಿ
ಅಭಿಸಾರ ಸಾರ ಮಣ್ಣು
ಹಸಿದೆನ್ನ ಹಲ್ಲಿಗಿದೊ
ರಸಭರಿತ ಹಣ್ಣು
ನೀರಜಾಕ್ಷನ ತುಟಿ ಕೆನ್ನೆ ಕಣ್ಣು

ಚಕ್ರ ಹಿಡಿದ ಕೈ
ಬೆರಲ ಸಂದಿನಲಿ
ಮಾಯದಿನ್ನು ಗಾಯ
ಕೊಳಲ ಸರ
ಮೈದಡವಿ ಹಾಯೆ
ನೋವು ಮಾದು ಮಾಯ

ಲಕ್ಷ ಕೋಟಿಗಳ
ಅಕ್ಷೋಹಿಣಿ ಕರಣಿಕೆ
ಬಿಡು ನಮ್ಮ ಅಳವಿಗಲ್ಲ
ಶಠ ಗೀತೆ ಬೋಧಿಸಿದ
ಕಮಲನಯನನ ಕಣ್ಣ
ಅಂಚ ಹನಿ ಹೊಳೆಯಿತಲ್ಲ

ನೀನು ನೀನೊ
ನಾ ನಾನೋ
ಮತ್ತವನು ಬೇರೆಯೇನೋ
ಸ್ವಚ್ಚಂದ ಛಂದ
ಅನಿಯಮದಾನಂದ
ನಾಡ ನಾಲಗೆಗಿದುವೆ ಹಾದರವೊ ಏನೋ

ಸಾಣೆಗೊಡ್ಡಿದಾ
ಇಟ್ಟಿಗೆಯ ರಜದಂತೆ
ಪಡುವಣದ ರಂಗ ಚಿತ್ತಾರ
ಮೃಗ ವಿವಶ ನಾದದಲಿ
ಇಂದೇಕೆ ಸುಳಿಯಿತೋ
ಚರಮ ಗೀತಾ ಹಂಸ ವಿಕಾರ






Wednesday 29 June 2016

ಮಡೋನಾ ಮತ್ತು ಬ್ಯಾಂಬಿನೋ*

ನೀಲಿ ನಿಲುವಂಗಿ ಧರಿಸಿದ ತರುಣಿ ಮಡಿಲಲ್ಲಿ
ಕೊಡಗೂಸು ಯೇಸು ಗಜಬೆಳಕಿನ ಮುದ್ದೆ
ತಾಯಿಮಗನ ತಲೆ ಸುತ್ತ ಪ್ರಾಚೀನರ ಪ್ರಭೆ
ಹೆರಳ ಮುಟ್ಟದಂತೆ ಎಳೆಯ ಮಿಂಚಿನ ಸಿಂಬಿ

ವಿಶಾಲ ಕಣಿವೆಗಳ ಈ ದೇಶ, ಹಿನ್ನೆಲೆಗೆ
ಜೋರ್ಡಾನಿನ ಸರೋವರ, ರೇಗಿಸ್ತಾನ
ದೇವಬಾಣಂತಿಯ ಸಾಬಾಣದೆಲುಬಿನ ಬಿಳುಪು
ಹರಡಿ ಪಟದುದ್ದಕ್ಕೂ ಚೆಲ್ಲಿದಂತೆ ಬೆಳ್ಳಿಹಿಟ್ಟು

ಕೂಸ ಕೈಲೆತ್ತಿ ಹಿಡಿದರೂ ಮುಖದಲ್ಲಿ ಮೂಡದ ನಗೆ
ಯಾವ ಪ್ರಾಚೀನ ದುಃಖಕ್ಕೆ ಇವಳ ಸಾಕ್ಷಿ?
ಸುತ್ತ ಸುಳಿವ ಹಸುಳೆ ದೇವದೂತರ ಪರದಾಟ
ಕಣಿ ಹೇಳುವ ಸಂತರ ದಂಡು. 
                                              
ಮುಂದೊಂದು ದಿನ 
ಈ ಕೂಸ ಶಿಲುಬೆಗೆ ಗಿಡಿದು ಮೊಳೆ ಹೊಡೆವಾಗ
ಹೆತ್ತ ಕರುಳು ಕಿವುಚಿ ಕೊರಳು ಬಿಗಿಯುವ ಮುನ್ನ
ಈಗಲೇ ಹಿಂಡಿದಂತಾಯಿತೇ ಹೃದಯ?
ಯಾರಿಗೂ ಕಾಣದ ದೇವರ ಸತ್ಯ 
ಕ್ಷಣದಲ್ಲಿ ಹೊಳೆದು 
ಮೂವತ್ತೆರಡು ವರ್ಷದ ಮುನ್ನ
ಮುಖದಲ್ಲಿ ಉಳಿಯಿತೇ ಅಳುವಿನಚ್ಚು?


ರೆನೆಸಾನ್ಸ್ ಯುರೋಪಿನ ಮಾತೆ ಮೇರಿ ಮತ್ತು ಬಾಲ ಯೇಸುವಿನ ವರ್ಣಚಿತ್ರಗಳಲ್ಲೆಲ್ಲಾ ಮೇರಿಯ ಮುಖದಲ್ಲಿ ಶೋಕದ ಒಂದು ಮಂದ ಛಾಯೆ ಇರುವುದನ್ನು ಕಲಾವಿಮರ್ಶಕರು ಗುರುತಿಸಿದ್ದಾರೆ. ಹಲವು ಮಧ್ಯಯುಗೀನ ವ್ಯಾಖ್ಯಾನಕಾರರ ಪ್ರಕಾರ ಮಗನ ಸಾವಿನ ಮುಂಗಾಣ್ಕೆ ಅವಳ ಮುಖದಲ್ಲಿದೆ.  




Tuesday 24 May 2016

ಮಳೆಗಾಲ: ಒಂದು ಹಾಯಿಕು

ಆಷಾಢ ಸೂರ್ಯನ ಬಿಸಿಲ ಸುತ್ತಿಗೆ ಬಡಿದು 
ಹದಗೊಂಡ ನೆಲದ ತಮಟೆಯ ಮೇಲೆ 
ತನಿ ನುಡಿವ ಕುಂಭದ್ರೋಣ

Thursday 21 April 2016

ಬೇಸಿಗೆ: ಒಂದು ಹಾಯಿಕು

(ಒಕ್ತಾವಿಯೋ ಪಾಜ್‍ನನ್ನು ಅನುಸರಿಸಿ)

ಕಣಿವೆ ಕಾನನದ ಮೇಲೆ
ವೈಶಾಖ ಸೂರ್ಯ
ಕಪ್ಪಿಟ್ಟ ಕೊಡಲಿ
ಕೈಯಲ್ಲಿ ಹಿಡಿದು ಸಾಗುವ

Tuesday 19 April 2016

ಜಲರಹಸ್ಯ

(ಲಿಯೋ ಯಾಂಕೆವಿಚ್‌ನ ಗುಂಗಿನಲ್ಲಿ)


ಬೆಟ್ಟಕ್ಕೆ ಮುಖಮಾಡಿದ ಪಡುವಣದ ಘಟ್ಟ
ತಲತಲಾಂತರದ ಏಲಕ್ಕಿ ಹಡಲು
ಕುರುಚಲು ಕಾಡು ಕಡಿದು ಹಿಟಾಚಿ ಸವರಿ 
ಈಗ ಇಲ್ಲೂ ಕಾಫಿ ತೋಟದ ಬಯಲು 

ನೆಳಲಿಗೆಂದು ನೆಟ್ಟ ಸಿಲವಾರ ಸುರಗಿ
ಹಾಲವಾಣದ ಸಸಿ ಗಗನಕ್ಕೆ ಬೆಳೆದು
ಪಿಕಳಾರ ಮಿಂಚುಳ್ಳಿ ಅಂಬರಗುಬ್ಬಿ ಗೂಡು
ಕಟ್ಟಿ ಆದಂತೆ ವನದುರ್ಗೆಯ ಬೀಡು

ಆರಿದ್ರೆಯ ಹುಚ್ಚು ಮಳೆ ತೋಟದ
ಒಳನುಗ್ಗದಿರಲೆಂದು ಹದಿನೆಂಟು
ವರ್ಷದ ಹಿಂದೆ ಅಗೆದ ನಾಕಡಿ
ಆಳದ ಕುಣಿ ಈಗ ನೀರ ರೊಚ್ಚಿಗೆ

ಎರಡಾಳುದ್ದ ಕೊರಕಲು, ಅಡ್ಡಕ್ಕೆ
ಚಾಚಿದ ಸಾರುವೆಯ ಸಪೂರ ದಡೆ ಜಾರಿ
ಹಗಲಲ್ಲಿ ಹಡೆದನ, ಇರುಳಲ್ಲಿ ಕುಡಿದ ಮರಗಳ್ಳರ
ಸೆಳೆವ ಬರಿದೊಡಲ ಪಾತಾಳ ಕಮರಿ  

ಹನ್ನೆರಡು ವರ್ಷ ಮಳೆನೀರ ನೆಚ್ಚಿ, ಅದರಲ್ಲಿ
ಏಳು ಸರತಿ ಕಾಫಿ ಹೂವರಳಿ ಬೇಸಿಗೆಗೆ
ಕಾಯಿ ಕಚ್ಚದೇ ಮುರುಟಿದ ಮೊಗ್ಗು
ಬೆರಳ ನಡುವೆ ಹುಡಿಯಾಗುವ ಕಂದು ಜುಂಗು

ಈ ವರ್ಷಕ್ಕೆ ಹೊಸದೊಂದು ಠರಾವು
ಶನಿವಾರಸಂತೆಯ ಸಾಬ ಅಂಗೈಯಲ್ಲಿ
ಚಿಮ್ಮುವ ತೆಂಗಿನಕಾಯಿ ಬಲದ ಮೇಲೆ
ಸಾವಿರ ಬಾವಿಗಳ ಕಸುಬುದಾರ

ಅಡಿಗೆಂಟುಸಾವಿರ ತಳಕ್ಕೆ ಮಣ್ಣು ಸಿಕ್ಕರೆ
ಕೂಲಿಯೂ ಮಾಫಿ ಮುಫತ್ತು ಖರ್ಚು
ನೆಲದೊಡಲಲ್ಲಿ ಕಲ್ಲಿದ್ದರೆ ಮಾತ್ರ ಯಾವ ಉಸ್ತಾದನಿಗೂ 
ಹೇಳಲಸಾಧ್ಯ, ಹಾಗಾಗಿ ನಮ್ಮದೇ ದರ್ದು

ನಾಕಾಳು ಸೇರಿ ಸುರುವಾದ ಗೇಯ್ಮೆ
ಮೊದಲ ದಿನಕ್ಕೆ ಆರಡಿ ಆಳದ ಹೊಂಡ
ಪಸೆಯಿದ್ದ ಬಿಳಿಯ ಮಣ್ಣು, ಸಾಬನ
ಅನುಭವಸ್ಥ ಕಣ್ಣಿಗೆ ಇನ್ನೆರಡು ದಿನದಲ್ಲಿ ನೀರು

ಎರಡನೆಯ ದಿನ ಬೇಸಿಗೆಯ ಝಳ
ಕೆದರಿದ ಗಡ್ಡ, ಹರಿದ ಲುಂಗಿ
ಮನೆಯಲ್ಲಿ ನಾಳೆ ಗಂಗಾಪೂಜೆಗೆ
ತಯಾರಾದ ಉಸಲಿ ಕೋಸಂಬರಿ

ಮೂರನೆಯ ದಿನಕ್ಕೆ ಇಪ್ಪತ್ತಮೂರಡಿ ಆಳ
ದೊರಗು ಮಣ್ಣಿನ ನಡುವೆ ಎರಡನೇ ಏಟು
ಹಾರೆಗೆ ಠಣ್ಣೆಂದು ಸಿಕ್ಕ ಬಂಡೆಗಲ್ಲು
ಅಲ್ಲಿಗೆ ನಮ್ಮ ಯೋಜನೆ ನುಚ್ಚುನೂರು

ಮಾರನೆಯ ದಿನ ಮಜೂರಿ ಲೆಕ್ಕಕ್ಕೆ
ಜಗುಲಿಗೆ ಬಂದ ಸಾಬನ ತಲೆ ಮೇಲೆ
ಟೋಪಿ, ಗಡ್ಡಕ್ಕೆ ಮೆಹಂದಿ. ಸೋತ
ನಮ್ಮ ಕಣ್ಣಲ್ಲಿ ಬಸುರಳಿದಂತೆ ನೋವು

ತಿಂಗಳ ನಂತರ ಸುರಿದ ಭರಣಿ ಮಳೆಗೆ
ಹಳ್ಳ ತುಂಬಿ ಮಿಂಚುಳ್ಳಿ ಪಿಕಳಾರಕ್ಕೆ ನೀರುನೆರಳು
ಈ ವರ್ಷವೂ ಕಮರಿದ ಫಸಲು
ವನದುರ್ಗೆಗೆ ಮಾತ್ರ ತುಂಬಿದ ಹಸಿರ ಹೆರಳು