Tuesday 27 April 2021

ಕವಿಯ ಗುನ್ಹೆ

ಪುಂಡರು ಹಳಿಯ ಕೀಲು ಕಿತ್ತು ಒಯ್ದಿದ್ದಾರೆ
ರೈಲು ಇನ್ನೇನು ಬರಲಿದೆ
ಅಷ್ಟರಲ್ಲಿ ಕಾಳಜಿಯ ಕಣ್ಣಿಗಿದು ಬಿದ್ದರೆ ಒಳಿತು

ಬಾಲ್ಕನಿಯಿಂದ ಮುಂದೆ ಬಾಗಿ ನಿಂತಿರುವ ಮಗು
ಇನ್ನೇನು ಭಾರಕ್ಕೆ ತಡೆಗೋಲು ಬಿರಿಯಲಿದೆ
ಅಷ್ಟರಲ್ಲಿ ಯಾರ ಕೈಕೊಕ್ಕೆಗಾದರೂ ಸಿಲುಕಿದರೆ ಒಳಿತು

ಸೇತುವೆಯ ಮೇಲೆ ನಿಂತಿರುವ ಒಬ್ಬಂಟಿ ಹುಡುಗಿ
ಅವಳ ತಲೆಯೊಳಗಿನ ಜೇನುಹುಟ್ಟು ಒಡೆದಿದೆ
ಅಷ್ಟರಲ್ಲಿ ಅನಾಮಿಕರಾದರೂ ಅಲ್ಲಿ ಕಂಡರೆ ಒಳಿತು

ಕುರುಡನ ಊರುಗೋಲು ಚಪ್ಪಡಿಯ ತಟ್ಟಿದೆ
ಅದರ ಬಿರುಕು ಕೊನೆಯ ಹೆಜ್ಜೆಗೆ ಕಾಯುತ್ತಿದೆ
ಅಷ್ಟರಲ್ಲಿ ಯಾರಾದರೂ ಅಡ್ಡ ಬಂದರೆ ಒಳಿತು

ಇದೆಲ್ಲಾ ನನ್ನ ಕಣ್ಣಿಗೆ ಕಂಡಿದೆ
ನನ್ನ ದೃಷ್ಟಿ ಜಗದ ಘಾತಕ್ಕೆ ಸಿಲುಕಿದೆ
ನನ್ನ ಬದಲು ಇಲ್ಲಿ ಬೇರೆ ಯಾರಾದರೂ ಇದ್ದಿದ್ದರೆ ಒಳಿತು.