Tuesday 13 September 2016

ಗಜೇಂದ್ರಮೋಕ್ಷ

ಎಲ್ಲಾದರೂ
ಆನೆ ಸತ್ತರೆ, ಸರಕಾರದವರು
ಅದರ ದಂತ ಕಿತ್ತು, ಹೂಳುತ್ತಾರೆ.

ದಂತದ ಆಸೆಗೆ ಕಳ್ಳರು
ಹೂಳಿದ ಆನೆಯನ್ನೂ ಮತ್ತೆ
ರಾತ್ರೋರಾತ್ರಿ ಬಗೆದು
ಕೊಡಲಿ ಗರಗಸ ಹಾರೆ ಮೀಟಿ
ಅದರ ಮುಖ ಕೊಚ್ಚುತ್ತಾರೆ:
ಆನೆಗೆ ಹೊರಗೆ ದಂತ ಎಷ್ಟುದ್ದವೋ 
ಅಷ್ಟೇ ಒಳಗೆ ದವಡೆಯಲ್ಲಿ

ಹೋದವಾರ ಐಗೂರಿನ ತೋಟಕ್ಕೆ 
ಆನೆ ನುಗ್ಗಿ ಹೊಂಡಕ್ಕೆ ಬಿದ್ದು ಸತ್ತಾಗ
ರೇಂಜ್ ಆಫೀಸಿನವರಿಗೆ
ಹೊಸ ಉಪಾಯ ಹೊಳೆದು
ಆನೆಯನ್ನು ಸುಡುವುದೆಂದು ನಿರ್ಧರಿಸಿದರು.

ರಾತ್ರೋರಾತ್ರಿ ನಾಲ್ಕಡಿ ಗುಂಡಿ ತೆಗೆದು
ಹಾಲವಾಣ, ಸಾರುವೆ ಸಕಲ ಸೌದೆ ಜೋಡಿಸಿ
ಆನೆಗೆ ಸರಪಳಿ ಹಾಕಿ ಜೆಸಿಬಿಯ ಸೊಂಡಿಲಲ್ಲಿ
ತಂದು ಚಿತೆಯ ಮೇಲಿಟ್ಟರು.

ಸುಮಾರು ಐದು ಗಂಟೆಗಳ
ಕಾಲ ಉರಿದ ಸೌದೆ ಅಟ್ಟೆ
ನಂದಿ ಇದ್ದಿಲಾಯಿತು.
ಪರ್ವತಾಕಾರದ ಆನೆ
ಮಾತ್ರ ಹಾಗೆಯೇ ಮಲಗಿತ್ತು. ದರಿದ್ರ ನಾತ.
ಸುಟ್ಟ ಚರ್ಮ. ನೀಲಮೇಘವೇ ನೆಲಕ್ಕೆ
ಇಡಿಯಾಗಿ ಬಿದ್ದಂತೆ.

ಆಮೇಲೆ
ಲಾರಿ-ಟ್ರ್ಯಾಕ್ಟರುಗಳ ಹಳೆಯ
ಟೈರುಗಳ ತಂದು ಏಳಡಿ ಉದ್ದದ
ಅಟ್ಟಣಿಗೆಯಂಥಾ ಚಿತೆಯ ಮೇಲೆ
ಕೊಳೆಯುತ್ತಿದ್ದ ಆನೆಯನ್ನು ಮತ್ತೆ ಜೋಡಿಸಿ
ಬೆಂಕಿ ತಾಗಿಸಿದರು.

ಅಷ್ಟಗಲ ಆನೆಯೇ ಆಕಾಶಕ್ಕೆದ್ದಂತೆ
ಕರಿಹೊಗೆ ಬಡಿದು ದೂರದ
ಬಿಸಿಲೆ ಘಾಟಿಗೂ ಕಾಣಿಸುತ್ತಿತ್ತಂತೆ.

ಮೂರು ರಾತ್ರಿ ಮೂರು ಹಗಲು
ಒಂದೇಸಮ ಉರಿದು
ಖಾಲಿಯಾದಂತೆಲ್ಲಾ ಟೈರು
ಸಮಿತ್ತುಗಳನ್ನು ಊಡಿ
ಸೀಮೆಯ ದೇವಸ್ಥಾನಕ್ಕೆಲ್ಲಾ
ಹೇಳಿಕೊಂಡು ಕೊನೆಗೂ
ಆನೆ ಸಂಪೂರ್ಣ
ಸುಟ್ಟು ಬೂದಿಯಾಯಿತು.

ಕೊನೆಗೆ ಊರ ಗುಡಿಯಲ್ಲಿ
ಸಂತರ್ಪಣೆ ನಡೆಸಿ
ಭಾಗವತರ ಕರೆಸಿ 
ಮಕರನಿಂದ ಗಜೇಂದ್ರನನ್ನು ಬಿಡಿಸುವ 
ಕತೆ ಹೇಳಿಸಿದ್ದಾಯಿತು.
ಕತೆಯ ಕೊನೆಗೆ 
ಆನೆ ಯಾರು ಮಕರನಾರು ತಿಳಿಯದಾಗಿ, 
ಚಿತ್ತ ಆಭಾಸಕ್ಕೆ ಸಿಲುಕಿತು.