Thursday 21 April 2016

ಬೇಸಿಗೆ: ಒಂದು ಹಾಯಿಕು

(ಒಕ್ತಾವಿಯೋ ಪಾಜ್‍ನನ್ನು ಅನುಸರಿಸಿ)

ಕಣಿವೆ ಕಾನನದ ಮೇಲೆ
ವೈಶಾಖ ಸೂರ್ಯ
ಕಪ್ಪಿಟ್ಟ ಕೊಡಲಿ
ಕೈಯಲ್ಲಿ ಹಿಡಿದು ಸಾಗುವ

Tuesday 19 April 2016

ಜಲರಹಸ್ಯ

(ಲಿಯೋ ಯಾಂಕೆವಿಚ್‌ನ ಗುಂಗಿನಲ್ಲಿ)


ಬೆಟ್ಟಕ್ಕೆ ಮುಖಮಾಡಿದ ಪಡುವಣದ ಘಟ್ಟ
ತಲತಲಾಂತರದ ಏಲಕ್ಕಿ ಹಡಲು
ಕುರುಚಲು ಕಾಡು ಕಡಿದು ಹಿಟಾಚಿ ಸವರಿ 
ಈಗ ಇಲ್ಲೂ ಕಾಫಿ ತೋಟದ ಬಯಲು 

ನೆಳಲಿಗೆಂದು ನೆಟ್ಟ ಸಿಲವಾರ ಸುರಗಿ
ಹಾಲವಾಣದ ಸಸಿ ಗಗನಕ್ಕೆ ಬೆಳೆದು
ಪಿಕಳಾರ ಮಿಂಚುಳ್ಳಿ ಅಂಬರಗುಬ್ಬಿ ಗೂಡು
ಕಟ್ಟಿ ಆದಂತೆ ವನದುರ್ಗೆಯ ಬೀಡು

ಆರಿದ್ರೆಯ ಹುಚ್ಚು ಮಳೆ ತೋಟದ
ಒಳನುಗ್ಗದಿರಲೆಂದು ಹದಿನೆಂಟು
ವರ್ಷದ ಹಿಂದೆ ಅಗೆದ ನಾಕಡಿ
ಆಳದ ಕುಣಿ ಈಗ ನೀರ ರೊಚ್ಚಿಗೆ

ಎರಡಾಳುದ್ದ ಕೊರಕಲು, ಅಡ್ಡಕ್ಕೆ
ಚಾಚಿದ ಸಾರುವೆಯ ಸಪೂರ ದಡೆ ಜಾರಿ
ಹಗಲಲ್ಲಿ ಹಡೆದನ, ಇರುಳಲ್ಲಿ ಕುಡಿದ ಮರಗಳ್ಳರ
ಸೆಳೆವ ಬರಿದೊಡಲ ಪಾತಾಳ ಕಮರಿ  

ಹನ್ನೆರಡು ವರ್ಷ ಮಳೆನೀರ ನೆಚ್ಚಿ, ಅದರಲ್ಲಿ
ಏಳು ಸರತಿ ಕಾಫಿ ಹೂವರಳಿ ಬೇಸಿಗೆಗೆ
ಕಾಯಿ ಕಚ್ಚದೇ ಮುರುಟಿದ ಮೊಗ್ಗು
ಬೆರಳ ನಡುವೆ ಹುಡಿಯಾಗುವ ಕಂದು ಜುಂಗು

ಈ ವರ್ಷಕ್ಕೆ ಹೊಸದೊಂದು ಠರಾವು
ಶನಿವಾರಸಂತೆಯ ಸಾಬ ಅಂಗೈಯಲ್ಲಿ
ಚಿಮ್ಮುವ ತೆಂಗಿನಕಾಯಿ ಬಲದ ಮೇಲೆ
ಸಾವಿರ ಬಾವಿಗಳ ಕಸುಬುದಾರ

ಅಡಿಗೆಂಟುಸಾವಿರ ತಳಕ್ಕೆ ಮಣ್ಣು ಸಿಕ್ಕರೆ
ಕೂಲಿಯೂ ಮಾಫಿ ಮುಫತ್ತು ಖರ್ಚು
ನೆಲದೊಡಲಲ್ಲಿ ಕಲ್ಲಿದ್ದರೆ ಮಾತ್ರ ಯಾವ ಉಸ್ತಾದನಿಗೂ 
ಹೇಳಲಸಾಧ್ಯ, ಹಾಗಾಗಿ ನಮ್ಮದೇ ದರ್ದು

ನಾಕಾಳು ಸೇರಿ ಸುರುವಾದ ಗೇಯ್ಮೆ
ಮೊದಲ ದಿನಕ್ಕೆ ಆರಡಿ ಆಳದ ಹೊಂಡ
ಪಸೆಯಿದ್ದ ಬಿಳಿಯ ಮಣ್ಣು, ಸಾಬನ
ಅನುಭವಸ್ಥ ಕಣ್ಣಿಗೆ ಇನ್ನೆರಡು ದಿನದಲ್ಲಿ ನೀರು

ಎರಡನೆಯ ದಿನ ಬೇಸಿಗೆಯ ಝಳ
ಕೆದರಿದ ಗಡ್ಡ, ಹರಿದ ಲುಂಗಿ
ಮನೆಯಲ್ಲಿ ನಾಳೆ ಗಂಗಾಪೂಜೆಗೆ
ತಯಾರಾದ ಉಸಲಿ ಕೋಸಂಬರಿ

ಮೂರನೆಯ ದಿನಕ್ಕೆ ಇಪ್ಪತ್ತಮೂರಡಿ ಆಳ
ದೊರಗು ಮಣ್ಣಿನ ನಡುವೆ ಎರಡನೇ ಏಟು
ಹಾರೆಗೆ ಠಣ್ಣೆಂದು ಸಿಕ್ಕ ಬಂಡೆಗಲ್ಲು
ಅಲ್ಲಿಗೆ ನಮ್ಮ ಯೋಜನೆ ನುಚ್ಚುನೂರು

ಮಾರನೆಯ ದಿನ ಮಜೂರಿ ಲೆಕ್ಕಕ್ಕೆ
ಜಗುಲಿಗೆ ಬಂದ ಸಾಬನ ತಲೆ ಮೇಲೆ
ಟೋಪಿ, ಗಡ್ಡಕ್ಕೆ ಮೆಹಂದಿ. ಸೋತ
ನಮ್ಮ ಕಣ್ಣಲ್ಲಿ ಬಸುರಳಿದಂತೆ ನೋವು

ತಿಂಗಳ ನಂತರ ಸುರಿದ ಭರಣಿ ಮಳೆಗೆ
ಹಳ್ಳ ತುಂಬಿ ಮಿಂಚುಳ್ಳಿ ಪಿಕಳಾರಕ್ಕೆ ನೀರುನೆರಳು
ಈ ವರ್ಷವೂ ಕಮರಿದ ಫಸಲು
ವನದುರ್ಗೆಗೆ ಮಾತ್ರ ತುಂಬಿದ ಹಸಿರ ಹೆರಳು